ಜಪಾನೀ ತತ್ತ್ವ -
	ಜಪಾನಿನ ತತ್ತ್ವಸಂಪ್ರದಾಯಕ್ಕೆ ಚೀನೀ ಹಿನ್ನೆಲೆಯಿದೆಯೆನ್ನುವುದು ನಿರ್ವಿವಾದ. ಮೊದ ಮೊದಲ ಜಪಾನಿನ ತಾತ್ತ್ವಿಕ ಬರೆಹಗಳೆಲ್ಲವೂ ಚೀನೀ ಲಿಪಿಯಲ್ಲಿಯೇ ಮೂಡಿಬಂದುವು. ಆಗ ಜಪಾನಿಗೆ ತನ್ನದೇ ಆದ ಲಿಪಿ ಇರಲಿಲ್ಲವೆಂದಲ್ಲ; ತಾತ್ತ್ವಿಕಭಾವನೆಗಳನ್ನೂ ಚಿಂತನೆಗಳನ್ನೂ ಸ್ಪಷ್ಟಗೊಳಿಸಲು ಅದರಲ್ಲಿ ಸಾಧ್ಯವಿರಲಿಲ್ಲ, ಅಷ್ಟೆ. ಚೀನೀ ಭಾಷೆಯೂ ಲಿಪಿಯೂ ಜಪಾನಿನ ಆಲೋಚನಾಪದ್ಧತಿಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದುವು. ಜಪಾನು ಬೌದ್ಧಧರ್ಮದೊಂದಿಗೆ ಸಂಪರ್ಕ ಹೊಂದಿದುದೂ ಸೂತ್ರಗಳ ಚೀನೀ ಅನುವಾದಗಳ ಮೂಲಕವೇ. ಚೀನೀ ಪ್ರಭಾವ ಜಪಾನನ್ನು ಮುಟ್ಟಿದುದು ಕ್ರಿ.ಶ. ಆರನೆಯ ಶತಮಾನದಲ್ಲಿ. ಎಂಟೊಂಬತ್ತನೆಯ ಶತಮಾನಗಳಲ್ಲಿ ಸುಯಿ ಮತ್ತು ಟ್ಯಾಂಗ್ ರಾಜವಂಶಗಳ ಕಾಲದಲ್ಲಿ ಚೀನದೊಂದಿಗೆ ನೇರವಾದ ಸಂಪರ್ಕ ಬೆಳೆಯಿತು. ಜಪಾನಿನಲ್ಲಿ ಚೀನೀ ಮಾತನಾಡುವವರ ಸಂಖ್ಯೆ ಬೆಳೆಯಿತು. ಚೀನೀ ಭಾಷೆಗೆ ಗೌರವ ಸ್ಥಾನ ದೊರೆಯಿತು. ಕಾಮಾಕುರಾ ಕಾಲದಲ್ಲಂತೂ (1185-1333) ಬೌದ್ಧ ಧರ್ಮ ಬೇರೂರಿದಾಗ ಚೀನೀ ಪಂಡಿತರೇ ಜಪಾನಿಗೆ ಬಂದು ಭಾಷೆಯ ಮೇಲೂ ಭಾವನೆಗಳ ಮೇಲೂ ತಮ್ಮ ಪ್ರಭಾವ ಬೀರಿದರು. ಪಾಂಡಿತ್ಯಪ್ರಪಂಚದಲ್ಲಿ ಹಳೆಯ ಜಪಾನೀ ವಿದ್ವಾಂಸರು ತಮ್ಮ ಬರಹಗಳನ್ನು ಚೀನೀ ಭಾಷೆಯಲ್ಲಿಯೇ ಮೂಡಿಸುತ್ತಿದ್ದರು. ಕಾಮಾಕುರಾ ಕಾಲದಲ್ಲಿಯೇ ಜಪಾನೀ ಭಾಷೆ ವಿಶೇಷವಾಗಿ ಬಳಕೆಗೆ ಬಂದುದು. ಆದರೂ ಹದಿನೆಂಟನೆಯ ಶತಮಾನದಲ್ಲಿ ಕೂಡ ಚೀನೀ ಭಾಷೆಯಲ್ಲಿಯೇ ಗ್ರಂಥಗಳನ್ನು ರಚಿಸುತ್ತಿದ್ದ ಜಪಾನೀ ಪಂಡಿತರಿದ್ದರು (ನೊಕಮೊತೊ-ತೊಮಿನಗ, ಬೈಎನ್- ಮಿಊರ ಮೊದಲಾದವರು). ಚೀನ ಜಪಾನುಗಳ ನಡುವೆ ಸಂಪರ್ಕವಿದ್ದರೂ ಜಪಾನಿನ ಪ್ರಭಾವ ಮಾತ್ರ ಚೀನದ ಮೇಲೆ ಬೀಳಲಿಲ್ಲ ಎನ್ನುವುದು ಗಮನಾರ್ಹ.

	ಜಪಾನಿನ ಪ್ರಾಚೀನ ಮತ್ತು ರಾಷ್ಟ್ರೀಯ ಧರ್ಮ ಷಿಂಟೋ (ದೇವ ಮಾರ್ಗ). ಇದಕ್ಕೂ ಚೀನದ ಕಾನ್‍ಫ್ಯೂಷನ್ ಧರ್ಮಕ್ಕೂ ಸಾದೃಶ್ಯಗಳು ಬಹಳ ಇವೆ. ಇದರಿಂದಾಗಿ ಎರಡೂ ಜನಾಂಗಗಳ ಆಚಾರವ್ಯವಹಾರಗಳೂ ಮನೋವೃತ್ತಿಗಳೂ ಕುಟುಂಬ ವ್ಯವಸ್ಥೆಯ ವಿವರಗಳೂ ಸುಮಾರಾಗಿ ಒಂದೇ ಆಗಿವೆಯೆನ್ನಬಹುದು. ಷಿಂಟೊ ಧರ್ಮದ ಮುಖ್ಯ ಲಕ್ಷಣವೆಂದರೆ ಪಿತೃದೇವತೆಗಳ ಆರಾಧನೆ. ಮೊದಲಿಗೆ ಜಪಾನೀ ಜನ ಸಣ್ಣಸಣ್ಣ ಬುಡಕಟ್ಟುಗಳಲ್ಲಿ ವಾಸಿಸುತ್ತಿದ್ದರು. ಪ್ರತಿ ಬುಡಕಟ್ಟಿನವರು ತಮ್ಮ ಮೂಲಪುರಷನನ್ನು (ಉಜಿಗಮಿ) ಪೂಜೆಮಾಡುವ ಪದ್ಧತಿಯಿತ್ತು. ಕುಟುಂಬದೇವತೆ ಇದ್ದಹಾಗೆ ಈ ಮೂಲಪುರುಷ. ತೀರಿಕೊಂಡವರಿಗೆಲ್ಲ ಮರ್ಯಾದೆ ಸಲ್ಲಿಸುವ ಮನೊವೃತ್ತಿ ಅಲ್ಲಿ ಹೀಗೆ ಆರಂಭವಾಯಿತು. ಹಳ್ಳಿಗಳ ಕಡೆ ಅದು ಇಂದಿಗೂ ಉಳಿದಿದೆ. ಜಪಾನಿನಲ್ಲಿ ವಂಶಕ್ಕೆ ಗೌರವ ಹೆಚ್ಚು; ಪ್ರತಿಯೊಬ್ಬನೂ ತನ್ನ ಹಿರಿಯರ ಬಗ್ಗೆ, ತನ್ನ ವಂಶದ ಪ್ರಾಚೀನತೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾನೆ. ಕಿರಿಯರು ಹಿರಿಯರ ವಿಚಾರವಾಗಿ ನಡೆದುಕೊಳ್ಳಬೇಕಾದ ರೀತಿನೀತಿಗಳನ್ನು ಕಾನ್‍ಫ್ಯೂಷನ್ ಧರ್ಮ ನಿರ್ಧರಿಸಿದಾಗ, ಜಪಾನೀಯರು ಇದನ್ನು ತಮ್ಮ ಧರ್ಮದಲ್ಲಿ ಅಳವಡಿಸಿಕೊಂಡರು. ಅಲ್ಲಿನ ಕುಟುಂಬ ವ್ಯವಸ್ಥೆಯೂ ಇದರ ಆಧಾರದ ಮೇಲೆ ಆಯಿತು. ಈಗಲೂ ಜಪಾನೀಯರ ಮನಸ್ಸಿನಲ್ಲಿ ಇಡೀ ಜಪಾನ್ ರಾಷ್ಟ್ರವೊಂದು ವಿಸ್ತøತ ಕುಟುಂಬವೇ. ಈ ನೆಲೆಯಲ್ಲಿಯೇ ರಾಜವಂಶಕ್ಕೆ, ಚಕ್ರವರ್ತಿಗೆ ಅಲ್ಲಿ ವಿಶೇಷವಾದ ಪ್ರಾಶಸ್ತ್ಯ ಒದಗಿಬಂತು. ಚಕ್ರವರ್ತಿ ಆಮಾತಿರಾಸು (ಸೂರ್ಯಾಣಿ) ಎಂಬ ಅಧಿದೇವತೆಯ ವಂಶಕ್ಕೆ ಸೇರಿದವನೆಂಬ ಕಲ್ಪನೆ ಅಲ್ಲಿದೆ.

	ಜಪಾನಿನಲ್ಲಿ ಕಾನ್‍ಫ್ಯೂಷನ್ ಧರ್ಮ ಮತ್ತು ತಾಓ ಧರ್ಮ ಸುಮಾರು ಆರನೆಯ ಶತಮಾನದಲ್ಲಿಯೂ ಬೌದ್ಧಧರ್ಮ ಅದೇ ಸುಮಾರಿನಲ್ಲಿಯೂ ಕ್ರೈಸ್ತಧರ್ಮ ಹದಿನಾರನೆಯ ಶತಮಾನದಲ್ಲಿಯೂ ನೆಲೆಯೂರಿದವು. ಇವೆಲ್ಲ ಆಗಂತುಕ ಧರ್ಮಗಳೇ. ಜಪಾನಿಗೆ ಸಹಜವಾಗಿ ಪ್ರಾಚೀನವಾಗಿದ್ದ ಧರ್ಮವೆಂದರೆ ಷಿಂಟೋ. ಷಿಂಟೋ ಎನ್ನುವ ಪದ ಚೀನೀ ಭಾಷೆಯ ಷೆನ್-ತಾಓ (ದೇವತೆಗಳ ಮಾರ್ಗ) ಎನ್ನುವ ಪದದ ಜಪಾನೀರೂಪ. ತತ್ತ್ವಪ್ರಣಾಳಿಕೆಗಳೇನೂ ಇರದಿದ್ದರೂ ಇದು ಮುಖ್ಯವಾಗಿ ಪ್ರಕೃತಿಪೂಜೆಯ ಲಕ್ಷಣಗಳನ್ನೊಳಗೊಂಡ ಧರ್ಮ. ಇದಕ್ಕೆ ಆಧಾರವಾಗಿ ಬರೆಹಗಳೇನೂ ಇರವು, ಷಿಂಟೋವಿನ ಧರ್ಮಗ್ರಂಥಗಳೆನ್ನುವುವು ಯಾವುವೂ ಇಲ್ಲ. ನೀತಿನಿಯಮಾವಳಿಗಳೂ ಇಲ್ಲ. ಮರಣಾನಂತರದ ಕಲ್ಪನೆಯೂ ಇಲ್ಲ. ಪಾಪ-ಪುಣ್ಯ ಎಂಬ ಭಾವನೆ ತೀರ ಪ್ರಾಚೀನ ಸ್ತರಕ್ಕೆ ಸೇರಿದ್ದು. ಪಾಪ ಮತ್ತು ಮೋಕ್ಷ ಎರಡೂ ಕಲ್ಪನೆಗಳು ಈ ಧರ್ಮದಲ್ಲಿವೆಯಾದರೂ ಅವು ಬಾಲಿಶ ಎನ್ನಬಹುದಾದಷ್ಟು ಸರಳವಾದವು. ವ್ರತಾಚರಣೆಗೆ ಹೆಚ್ಚು ಗಮನಕೊಟ್ಟಿರುವ ಈ ಧರ್ಮದಲ್ಲಿ ಸಾವಿರಾರು ದೇವತೆಗಳು. ಪ್ರತಿಯೊಂದು ಪ್ರಾಕೃತಿಕ ವಿವರವೂ ಪ್ರಸಂಗವೂ ವಸ್ತುವೂ ಒಂದು ದೇವತೆಯ ಇರವನ್ನು ಪ್ರಭಾವವನ್ನು ಸೂಚಿಸುವಂಥದೇ. ಐದಾರನೆಯ ಶತಮಾನಗಳಲ್ಲಿ ಕಾನ್‍ಫ್ಯೂಷನ್ ಧರ್ಮದ ಸಂಪರ್ಕದಿಂದ ಈ ಧರ್ಮ ಹಿರಿಯರ ಆರಾಧನೆಯನ್ನು ವಿಶೇಷವಾಗಿ ಬೆಳೆಸಿಕೊಂಡಿತು.

	ಷಿಂಟೋ ಧರ್ಮದ ಪ್ರಭಾವದಿಂದ ಜಪಾನಿನಲ್ಲಿ ನೂರಾರು ದೇವತೆಗಳೂ ಅವರ ಬಗ್ಗೆ ಸ್ವಾರಸ್ಯವಾದ ಪುರಾಣಕಥೆಗಳೂ ಮೈದಳೆದವು. ಬೌದ್ಧಧರ್ಮ ಅಲ್ಲಿಗೆ ಬಂದಾಗ ಷಿಂಟೋ ಧರ್ಮದೊಂದಿಗೆ ವಿರಸ ಅನಿವಾರ್ಯವಾಯಿತು. ಆದರೆ ಎಂಟನೆಯ ಶತಮಾನದ ಸುಮಾರಿಗೆ ಬೌದ್ಧಧರ್ಮ ಪ್ರಬಲವಾಗಲು, ಷಿಂಟೋ ಹಾಗೂ ಬೌದ್ಧಧರ್ಮಗಳ ಸಮನ್ವಯ ಪ್ರಯತ್ನ ನಡೆಯಿತು. ಕೋಬೋ ದಾಯ್‍ಷಿ (774-835) ಎಂಬ ಬೌದ್ಧಭಿಕ್ಷುವೇ ಇದಕ್ಕೆ ಕಾರಣನಾದ. ರ್ಯೋಬುಷಿಂಟೋ ಎಂಬ ಹೆಸರಿನಿಂದ ಈ ಹೊಸ ಪ್ರಯತ್ನ ಜನಪ್ರೀತಿಯನ್ನು ಪಡೆಯಿತು. ಕೆಲವು ಷಿಂಟೋ-ಬೌದ್ಧ ದ್ವಂದ್ವಮಂದಿರಗಳು ಮೈದಳೆದವು. ಕೆಲವು ಆಚಾರಗಳಲ್ಲಿ, ವ್ರತಗಳಲ್ಲಿ ಮಾರ್ಪಾಟು ತಲೆದೋರಿತು. ಮುಖ್ಯವಾಗಿ ಷಿಂಟೋ ಧರ್ಮಕ್ಕೆ ಒಂದು ನೈತಿಕ ಮನೋವೃತ್ತಿಯನ್ನೂ ತಾತ್ತ್ವಿಕ ತಳಹದಿಯನ್ನೂ ಒದಗಿಸುವುದು ಈ ಪ್ರಯತ್ನದ ಉದ್ದೇಶವಾಗಿತ್ತು. ಆದರೆ ಹದಿನೇಳನೆಯ ಶತಮಾನದ ವೇಳೆಗೆ ಶುದ್ಧ ಷಿಂಟೋಗಳ ವಿರೋಧ ಹೆಚ್ಚಾಗಿ ರ್ಯೋಬು ಷಿಂಟೋ ಕಳೆಗುಂದಿ ಮರೆಯಾಯಿತು.

	ಚೀನದಿಂದ ಒದಗಿಬಂದ ಕಾನ್‍ಫ್ಯೂಷಸನ ಪ್ರಭಾವ ರಾಷ್ಟ್ರೀಯ ಧರ್ಮವಾಗಿದ್ದ ಷಿಂಟೋವಿನಲ್ಲಿ ಅಡಕವಾಗಿಯಿತು. ಪ್ರತ್ಯೇಕವಾದ ಕಾನ್‍ಫ್ಯೂಷನ್ ಧರ್ಮವಾಗಲೀ ತಾತ್ತ್ವಿಕ ಸಂಪ್ರದಾಯವಾಗಲೀ ಬೆಳೆಯಲಿಲ್ಲ. ಆದರೆ ನವ್ಯ ಕಾನ್‍ಫ್ಯೂಷಿಯನ್ ಸಂಪ್ರದಾಯ ಕೊಂಚ ಪ್ರಭಾವ ಬೀರಿತು. ಮುಖ್ಯವಾಗಿ ಚು-ಹ್ಸಿ (1130-1200) ಮತ್ತು ವಂಗ್ ಯಂಗ್-ಮಿಂಗ್ (1472-1529) ಇವರಿಬ್ಬರ ತತ್ತ್ವಪ್ರಣಾಳಿಕೆಗಳು ಜಪಾನೀ ಪಂಡಿತರ ಆಸಕ್ತಿಯನ್ನು ಕೆರಳಿಸಿದವು. ಪ್ರಾಚೀನ ಕಾನ್‍ಫ್ಯೂಷನ್ ಸ್ತರಕ್ಕೆ ಸೇರಿದ ನಾಲ್ಕು ವೇದಗಳಿಗೆ ಚು-ಹ್ಸಿ (ಜಪಾನಿಯಲ್ಲಿ ಶು-ಶಿ) ಹೊಸದಾಗಿ ವ್ಯಾಖ್ಯಾನಗಳನ್ನು ಬರೆದು ನೈತಿಕ ಮತ್ತು ಸಾಮಾಜಿಕ ತಾತ್ತ್ವಿಕ ನೆಲೆಯನ್ನು ಸ್ಪಷ್ಟಗೊಳಿಸಿದ. ಚೀನೀ ಶಿಕ್ಷಣ ಪದ್ಧತಿಗೆ ಇವನ ಬರೆಹಗಳು ಆದಾರ ಭೂತವಾದುವು. ವಂಗ್ ಯಂಗ್-ಮಿಂಗ್ ಕಾನ್‍ಫ್ಯೂಷನ್ ಧರ್ಮದ ವಿರುದ್ಧವಾಗಿ ಪ್ರಚಾರ ನಡೆಸಿ ಆಡಳಿತವರ್ಗದ ಆಗ್ರಹಕ್ಕೆ ತುತ್ತಾದ ಪ್ರತಿಭಾಶಾಲಿ. ಈತನ ಸಿದ್ಧಾಂತದಲ್ಲಿ ವಿಶ್ವವ್ಯಾಪಕತತ್ತ್ವ (ಲಿ) ಮತ್ತು ಮನುಷ್ಯನ ಮನಸ್ಸು ಎರಡೂ ಅಭಿನ್ನವಾದುವು. ಒಂದು ಬಗೆಯ ಅದ್ವೈತವಾದ ಇದು. ಮನುಷ್ಯನ ಮನಸ್ಸಿನಲ್ಲಿ ಇಡೀ ವಿಶ್ವದ ಸಾರಸರ್ವಸ್ವ ಅಡಗಿರುವುದು ಮಾತ್ರವಲ್ಲದೆ, ವಿಶ್ವ ವಿಕಾಸದ ಅತ್ಯುಚ್ಚ ನೆಲೆಯೂ ಅಡಗಿದೆ. ಅದು ಸತ್ಯಂ, ಶಿವಂ ಎರಡೂ ಹೌದು. ಮುನಿಯಾದವ ಎಲ್ಲ ವಸ್ತುಗಳೊಂದಿಗೆ ತಾದಾತ್ಮ್ಯವನ್ನು ಅನುಭವಿಸುತ್ತಾನೆ. ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಕ್ರಿಯೆಯ ಮೂಲಕ ಅಭಿವ್ಯಕ್ತಗೊಳಿಸುವುದೇ ನೈತಿಕ ಜೀವನದ ಪ್ರಮುಖ ಲಕ್ಷಣ. ಈ ಇಬ್ಬರು ಚೀನೀ ಪಂಡಿತರ ಬರೆಹಗಳು ಜಪಾನಿನಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದುವು. ಇವರ ವಿಚಾರಧಾರೆಯಿಂದ ಪ್ರಜೋದಿತವಾಗಿ ಹಲವಾರು ಗ್ರಂಥಗಳು ಮೈದಳೆದುವು.

	ಕಾನ್‍ಫ್ಯೂಷನ್ ಧರ್ಮದ ಸಂಪರ್ಕದಿಂದಾಗಿ ಜಪಾನಿನ ರಾಜಕೀಯ, ಸಾಮಾಜಿಕ ಶೈಕ್ಷಣಿಕ ಪದ್ಧತಿಗಳು ಅದರ ಪಡಿಯಚ್ಚಿನಲ್ಲಿಯೇ ರೂಪಿತವಾದವು. ಆದರೆ ಜನರ ಮನೋವೃತ್ತಿಯನ್ನು ಮಾರ್ಪಡಿಸುವುದಾಗಲಿಲ್ಲ. ವಿಶ್ವವ್ಯವಸ್ಥೆಯ ಬಗ್ಗೆ, ಮನುಷ್ಯ ಜೀವನದ ತಾತ್ತ್ವಿಕ ನೆಲೆಯ ಬಗ್ಗೆ ಜಪಾನೀ ಚಿಂತನಕ್ಕೆ ಸ್ಫೂರ್ತಿ ಕೊಟ್ಟಿದ್ದು ನವ್ಯ ಕಾನ್‍ಫ್ಯೂಷನ್ ಧರ್ಮ, ಈ ಸ್ಫೂರ್ತಿಯೂ ತುಂಬ ಸಮರ್ಥವೇನಾಗಲಿಲ್ಲ.

	ಜಪಾನೀ ತತ್ತ್ವಶಾಸ್ತ್ರದಲ್ಲಿ ಪ್ರಧಾನಪಾತ್ರ ಬೌದ್ಧದರ್ಶನದ್ದೇ. ಅಡ್ಡಿಯಿಲ್ಲ. ಜನಗಳಿಗೆ ಅಗತ್ಯವಾದ, ಅನುಕೂಲವಾದ ಧರ್ಮವನ್ನು ಒದಗಿಸಿಕೊಟ್ಟುದೂ ಅದೇ; ಅದರ ನೆಲೆಯಲ್ಲಿಯೇ ತಾತ್ತ್ವಿಕ ವಿಚಾರಧಾರೆಯೂ ಬೆಳೆಯಿತು. ದೆಂಗ್ಯೊ ದಾಯ್‍ಷಿ (767ರ ಸುಮಾರು) ಎಂಬ ಜಪಾನೀ ಭಿಕ್ಷು ಚೀನಕ್ಕೆ ಹೋಗಿ ಅಲ್ಲಿ ಟಿಯಾನ್-ತಾಯ್‍ಪಂಥದ ಬರೆಹಗಳನ್ನು ಅಧ್ಯಯನಮಾಡಿ ಹಿಂದಿರುಗಿದ ಅನಂತರ ಕೀಯೋಟೋ ನಗರದ ಬಳಿ ಹಿಐ ಬೆಟ್ಟದ ಮೇಲೆ ತೆಂಡಾಯ್ ಬೌದ್ಧ ಪಂಥದ ಕೇಂದ್ರವನ್ನು ಸ್ಥಾಪಿಸಿದ. ಇದು ಜಪಾನಿನಲ್ಲಿ ತುಂಬ ಪ್ರಭಾವಶಾಲಿಯಾಯಿತು.

	ಇದಕ್ಕೆ ಮೊದಲೇ, ಅಂದರೆ ಕ್ರಿಸ್ತಾಬ್ದ 712ರ ಸುಮಾರಿಗೆ ಟಿಂಪ್ಯೊ ಯುಗದಲ್ಲಿ ವೈ-ಷಿ ಎಂಬ ಚೀನೀ ಬೌದ್ಧ ಪಂಥ ಜಪಾನಿಗೆ ಬಂದಿತ್ತು. ಇದು ಹೋಸ್ಸೋ ಎಂಬ ಹೆಸರಿನಿಂದ ಅಲ್ಲಿ ಬಳಕೆಗೆ ಬಂದು, ಕಿಯೋಟೋ ಬಳಿಯ ಹಿಎಐ (ಹಿಎಐ-ಸನ್) ಎಂಬ ಕೇಂದ್ರವೊಂದನ್ನು ಪಡೆದಿತ್ತು. ಇದರಿಂದ ಪ್ರಭಾವಿತನಾದ ಕಮ್ಮು ಚಕ್ರವರ್ತಿಯೇ ದೆಂಗ್ಯೋದಾಯ್‍ಷಿಯನ್ನು ಚೀನಕ್ಕೆ ಸೂತ್ರಸಂಗ್ರಹಕ್ಕಾಗಿ ಕಳುಹಿಸಿದ್ದು. ಚೀನದಲ್ಲಿ ಭಿಕ್ಷುಪ್ರಮುಖವಾದ ಟಿಎನ್-ತಾಯ್‍ಪಂಥಕ್ಕೆ ಈತನ ಮನಸ್ಸು ಒಲಿಯಿತು. ಈ ಪಂಥದ ಪ್ರವರ್ತಕ ದೋಷೋ (629-700) ಎಂಬ ಬೌದ್ಧ ಭಿಕ್ಷು. ಸುಮಾರು 806ರಲ್ಲಿ ಕೋಬೋ ದಾಯ್‍ಷಿ ಎಂಬ ಪ್ರಖ್ಯಾತ ಸಂತ ಷಿಂಗಾನ್ ಬೌದ್ಧಪಂಥವನ್ನು ಆರಂಭಿಸಿದ. ಚೀನದ ಛೆ-ಎನ್ ಎನ್ (ದಿಟವಾದ ಮಾತು) ಎಂಬ ಪಂಥದ ಮಾದರಿಯ ಮೇಲೆ ಮೂಡಿಸಿದ ಷಿಂಗಾನ್‍ನಲ್ಲಿ ಮಂತ್ರ ತಂತ್ರಗಳಿಗೆ ಹೆಚ್ಚು ಬೆಲೆ. ವಿಶ್ವವನ್ನು ಮಂಡಲದಲ್ಲಿ ನಿರೂಪಿಸುವ ಪದ್ಧತಿ ಈ ಪಂಥದಿಂದ ಆರಂಭವಾಯಿತು. ಮಹಾ ವೈರೋಚನ ಬುದ್ಧನ (ದೈನಿಚಿ) ಮೈಯೇ ಇಡೀ ವಿಶ್ವ. ಇದರ ರಹಸ್ಯಗಳನ್ನು ಪ್ರತೀಕಗಳಲ್ಲಿ ಮಂಡಲಗಳಲ್ಲಿ ಮಂತ್ರಗಳಲ್ಲಿ ಅಡಗಿಸಬಹುದು. ಈ ದೃಷ್ಟಿಯನ್ನು ಪ್ರತಿಪಾದಿಸಿದ ಷಿಂಗಾನ್ ಪಂಥ ತೆಂಡಾಯ್ ವಿಚಾರಧಾರೆಯನ್ನು ಅಂಗೀಕರಿಸಿತು.

	ತೆಂಡಾಯ್ ಶಾಖೆಯ ತಾತ್ತ್ವಿಕ ನಿಲವು ಸ್ವಾರಸ್ಯವಾದುದು. ವ್ಯಾವಹಾರಿಕವಾಗಿ ಇರುವುದು ಪಾರಮಾರ್ಥಿಕವಾಗಿಯೂ ಇದೆ. ಬುದ್ಧಸ್ವಭಾವ ವಿಶ್ವದ ಎಲ್ಲ ವಸ್ತುಗಳಲ್ಲಿಯೂ ಅಡಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸುಪ್ತವಾಗಿದೆ. ನಮ್ಮ ಬುದ್ಧಸ್ವಭಾವವನ್ನು ಸಂಪೂರ್ಣವಾಗಿ ಅರಿಯುವುದೇ ಸಂಬೋಧಿ (ಹೊಂಕಕು); ಬುದ್ಧನ ಕೆಲಸದಲ್ಲಿ ನಾವೆಲ್ಲ ಭಾಗಿಗಳಾಗಬೇಕು. ಅವನ ಉದ್ದೇಶ ಸಾಧನೆಗೆ ನೆರವಾಗಬೇಕು. ನೀತಿನಿಯಮಗಳು, ವ್ರತಾಚರಣೆ, ಧ್ಯಾನ ಇವೆಲ್ಲವೂ ಬುದ್ಧನಲ್ಲಿ ಶ್ರದ್ಧೆಯಿಲ್ಲದಿದ್ದರೆ ವ್ಯರ್ಥ. ಶ್ರದ್ಧೆಯೆಂದರೆ ಕೇವಲ ಬುದ್ಧಪೂಜೆಯಲ್ಲ, ಅವನ ದರ್ಶನವನ್ನು ಒಪ್ಪಿಕೊಳ್ಳುವುದಲ್ಲ; ವಿಶ್ವಬುದ್ಧ-ಸ್ವಭಾವದಲ್ಲಿ ಪಾಲ್ಗೊಳ್ಳುವುದು. ವೈಯಕ್ತಿಕ ಬದುಕನ್ನು ವಿಶ್ವಜೀವನಕ್ಕೆ ಅಳವಡಿಸಿಕೊಳ್ಳುವುದೇ ಶ್ರದ್ಧೆ. ಈ ವಿಶ್ವ, ಸನಾತನ ಬುದ್ಧಸ್ವಭಾವದ ಐತಿಹಾಸಿಕ ಅಭಿವ್ಯಕ್ತಿ ಗೌತಮ ಬುದ್ಧ; ವಿಶ್ವಮೋಕ್ಷವನ್ನು ಸಾಧಿಸಲು ಯಾವ ಕಾಲದಲ್ಲಾದರೂ ಎಲ್ಲಿಯಾದರೂ ಬುದ್ಧ ಅವತರಿಸಬಹುದು. ಅದು ಧರ್ಮತೆಯ ಒಂದು ಅಭಿವ್ಯಕ್ತಿ ಅಷ್ಟೆ; ಧರ್ಮತೆಯೆನ್ನುವುದು ಪ್ರಪಂಚದ ಮೂಲಸ್ವರೂಪ. ಈ ಪಂಥದವರು ತ್ರಿಕಾಯ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಎಲ್ಲರೂ ಪಾಲ್ಗೊಳ್ಳುವ, ವಿಶ್ವಬುದ್ಧ ಸ್ವಭಾವವುಳ್ಳ ಧರ್ಮಕಾಯ (ಹೊಶ್ಯಿನ್), ಶ್ರದ್ಧೆಗೆ ಆಕಾರವಾದ, ಮೂರ್ತ ಪ್ರಕಾರದ ನಿರ್ಮಾಣಕಾಯ(ವೋ-ಜಿನ್), ಮತ್ತು ಸ್ವರ್ಗದ ಇರವಿನ ವೈಭವದಲ್ಲಿ ಮೂಡಿಬರುವ ಸಂಭೋಗಕಾಯ (ಹೋ-ಜಿನ್) ಇವೇ ತ್ರಿಕಾಯಗಳು.

	ನಿರ್ವಾಣ ಮತ್ತು ಸಂಸಾರಗಳ ತಾದಾತ್ಮ್ಯವನ್ನು ಕೀಗೊನ್ ಪಂಥವೂ ಅಂಗೀಕರಿಸಿದೆ. ಅವತಂಸಕಸೂತ್ರದ ಆಧಾರದ ಮೇಲೆ ರೂಪಿತವಾದ ಈ ಪಂಥವನ್ನು ಕೊರಿಯದು ಭಿಕು ಜಿಂಜೋ(ಸಮಾಧಿ 742) ಜಪಾನಿನಲ್ಲಿ ಬೇರೂರಿಸಿದ. ಎಲ್ಲ ಜಂಗಮ ಪ್ರಾಣಿಗಳಲ್ಲಿಯೂ ಬುದ್ಧಸ್ವಭಾವ ಇದೆ. ನಾವು ಬೇರೆ, ವಿಶ್ವ ಬೇರೆ ಎಂದು ಬಗೆಯುವುದು ಮಾಯೆ. ವ್ಯಕ್ತಿಯ ಅಹಂಕಾರ ಅಳಿಯದೆ ಮುಕ್ತಿಯಿಲ್ಲ. ಬೋಧಿಸತ್ತ್ವರು ತಮ್ಮ ಅನುಕಂಪದಿಂದ ಜ್ಞಾನದಿಂದ ನಮ್ಮನ್ನೆಲ್ಲ ಬುದ್ಧತ್ವದ ಕಡೆ ಒಯ್ಯುವರು. ಈ ನಿಲವನ್ನು ತಳೆದ ಕೀಗೊನ್ ಪಂಥ ಮುಂದೆ ಜೆóನ್‍ಪಂಥಕ್ಕೆ ದಾರಿ ಮಾಡಿಕೊಟ್ಟಿತು. ಚೀನದಲ್ಲಿ ಈ ಪಂಥ ಹುಅ ಯೆನ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದಿತು. ಅಲ್ಲಿ ತು-ಷುನ್ (557-640) ಎಂಬಾತನೇ ಅದರ ಪ್ರವರ್ತಕನಾಗಿದ್ದು ಮಹಾವೈಪುಲ್ಯಸೂತ್ರದ ಆಧಾರದಮೇಲೆ ತನ್ನ ಉಪದೇಶಗಳನ್ನು ರೂಪಿಸಿದ. ಬುದ್ಧ ಸಂಬೋಧಿಯನ್ನು ಪಡೆದೊಡನೆ ಬೋಧಿಸತ್ತ್ವರಿಗೆ ಈ ಸೂತ್ರವನ್ನು ಉಪದೇಶಿಸಿದನಂತೆ; ಸಾಮಾನ್ಯಮನುಷ್ಯರಿಗೆ ದುಗ್ರ್ರಾಹ್ಯವಾಗಿದ್ದ ಈ ಸೂತ್ರವನ್ನು ತು-ಷುನ್ ಸರಳಗೊಳಿಸಿದ. ಪ್ರಖ್ಯಾತ ಯಾತ್ರಿಕನಾಗಿದ್ದ ಹ್ಯು-ಎನ್-ತ್ಸಾಂಗ್ ಈ ಪಂಥಕ್ಕೆ ಸೇರಿದ್ದವ. ಸತ್ತ್ವ, ಅಸತ್ತ್ವಗಳೆರಡೂ ಮಾಯಾಕಲ್ಪಿತ; ಮಹಾಶೂನ್ಯದಲ್ಲಿ ಅವೆರಡರ ಅಭಾವವಿರುತ್ತದೆ. ಶಾಶ್ವತವಾದ ಅವಿಕಾರ್ಯವಾದ ಆಲಯವಿಜ್ಞಾನವೇ ಎಲ್ಲ ಸಂಸ್ಕøತ ಧರ್ಮಗಳಿಗೂ ಮೂಲ. ಇದು ಕೀಗೊನ್ ಪಂಥದ ನಿಲವು.

	ಜಪಾನಿನಲ್ಲಿ ತುಂಬ ಜನಪ್ರಿಯವಾದ ಬೌದ್ಧಪಂಥವೆಂದರೆ ಜೋಡೋ (ಚೀನೀ-ಚಿ)ಇದರಲ್ಲಿ ಅಮಿತಾಭನೆಂಬ (ಅಮಿದ) ಬುದ್ಧನ ಶುದ್ಧಕ್ಷೇತ್ರದ ಕಲ್ಪನೆ ಮುಖ್ಯವಾದುದು. ಪುನರ್ಜನ್ಮದ ಅಗತ್ಯದಿಂದ ಮುಕ್ತರಾದ ಜೀವರು ಇಲ್ಲಿ ರಹಸ್ಯ ಕಮಲದಲ್ಲಿ ಹುಟ್ಟುತ್ತಾರೆ; ನಿರ್ವಾಣವೆಂಬ ಆಧ್ಯಾತ್ಮಿಕ ಪ್ರಯೋಜನಕ್ಕಿಂತ ಜನಸಾಮಾನ್ಯರಿಗೆ ಅಮಿತಾಭನ ಕರುಣೆಯಿಂದ ಎಂದೆಂದೂ ಸುಖವಿರುವ ಸ್ವರ್ಗದಲ್ಲಿ ಹುಟ್ಟುವುದು ಹೆಚ್ಚು ಪ್ರಿಯವಾದುದು ಸಹಜವೇ. ಅಮಿತಾಭ (ಅಥವಾ ಅಮಿತಾಯಸ್) ಪರಮಾರ್ಥಿಕ ತತ್ತ್ವವಲ್ಲ. ಮನುಷ್ಯರ ಭಕ್ತಿಗೆ ನಿಲಕುವ ದೈವ. ಅವನ ಸ್ವರ್ಗವೇ ಶುದ್ಧಕ್ಷೇತ್ರ; ಅದಕ್ಕೆ ಸುಖಾವತಿಯೆಂದು ಹೆಸರು. ಇಲ್ಲಿ ಹುಟ್ಟಿದೊಡನೆ ನಿರ್ವಾಣ ಸುಲಭ ಸಾಧ್ಯವಾಗುತ್ತದೆ. ಜೀವದ ಶ್ರದ್ಧೆ. ಅಮಿತಾಭನ ಕರುಣೆ ಎರಡೂ ಕಲೆತು ಸಾಧನೆಯೆನಿಸಿಕೊಳ್ಳುತ್ತದೆ; ಇದಕ್ಕೆ ಜಪಾನೀ ಭಾಷೆಯಲ್ಲಿ ತಾರಿಕಿ ಎನ್ನುತ್ತಾರೆ. ಪಶ್ಚಿಮ ದಿಗ್ಭಾಗದಲ್ಲಿರುವ ಸುಖಾವತಿಯಲ್ಲಿ ಹುಟ್ಟಲು ನೆರವಾಗುವುದು ಅಮಿತಾಭನ ಹೆಸರಿನ ಪುರಶ್ಚರಣೆ (ನೆಂಬುತ್ಸು). ಸುಖಾವತೀವ್ಯೂಹ ಸೂತ್ರ ಮತ್ತು ಅಮಿತಾಯುಧ್ರ್ವಾನ ಸೂತ್ರ ಎರಡೂ ಈ ಪಂಥದ ಆಧಾರಗ್ರಂಥಗಳು.

	ಜೋಡೋ ಪಂಥದಲ್ಲಿ ನಾಲ್ಕು ಶಾಖೆಗಳು : ಶುದ್ಧ ಜೋಡೋ, ಜೋಡೋ-ಶಿನ್-ಶೂ, ಯುಸುನೆಂಬುತ್ಸು ಮತ್ತು ಜೆ. ಶುದ್ಧಜೋಡೋ ಶಾಖೆಯ ಪ್ರವರ್ತಕ ಹೊನೆನ್-ಶೋನಿನ್(ಗೆಂಕು) 1133-1212. ಮೊದಲಿಗೆ ತೆಂಡಾಯ್ ಪಂಥಕ್ಕೆ ಸೇರಿದ್ದ ಈತ ಅಲ್ಲಿಂದ ಹೊರಬಂದು ಸಂತನೆಂದು ಪ್ರಖ್ಯಾತನಾದ. ಈತನ ಕವಿತೆಗಳು ಇಂದಿಗೂ ಉಳಿದಿವೆ. ಈತನ ಶಿಷ್ಯನಾದ ಶಿನ್‍ರಾನ್ (173-1263) ಎಂಬಾತ ಜೋಡೋ-ಶಿನ್-ಶೂ ಶಾಖೆಯನ್ನು ಆರಂಭಿಸಿದ. ಜಪಾನಿನ ಬೌದ್ಧರಲ್ಲಿ ಬಹುಮಂದಿ ಈ ಶಾಖೆಗೆ ಸೇರಿದವರು. ಮೊದಲು ಭಿಕ್ಷುವಾಗಿದ್ದ ಶಿನ್‍ರಾನ್ ಈ ಶಾಖೆಯನ್ನು ಆರಂಭಿಸಿದಮೇಲೆ ಮದುವೆಯಾಗಿ ಸಂಸಾರಿಯಂತೆ ಬಾಳನ್ನು ಕಳೆದ. ಸುಖಾವತಿಯನ್ನು ಮುಟ್ಟಬೇಕಾದರೆ ಭಿಕ್ಷುವೇ ಆಗಿರಬೇಕೆಂಬ ನಿಯಮವಿಲ್ಲ-ಎಂಬುದು ಆತನ ನಿಲವು. ಅಮಿತಾಭ ಬುದ್ಧನ ಕರುಣೆ ಉಚಿತವಾದ ದಾನ; ಶೀಲವಾಗಲೀ ಜ್ಞಾನವಾಗಲೀ ಅವಕ್ಕೆ ಕಾರಣವಲ್ಲ. ಶ್ರದ್ಧೆ ಮುಖ್ಯವಾದುದು. ಅಮಿತಾಭನ ಶಕ್ತಿಯಾದ ಕ್ವಾನ್ನನ್ ದೇವತೆ ಈ ಶಾಖೆಯಲ್ಲಿ ಮುಖ್ಯಪಾತ್ರ ವಹಿಸುತ್ತಾಳೆ. ಭಿಕ್ಷುವಾಗಿದ್ದ ಶಿನ್‍ರಾನ್‍ಗೆ ಮದುವೆಯಾಗೆಂದು ಸಲಹೆ ಮಾಡಿದವಳು ಈಕೆಯೇ ಎಂದು ಪ್ರತೀತಿ. ಅವಲೋಕಿತೇಶ್ವರನ ಸ್ತ್ರೀರೂಪವಾದ ಈಕೆ ಜಪಾನಿನ ಜನಪ್ರಿಯ ದೇವತೆ. ಹದಿನೈದನೆಯ ಶತಮಾನದ ವೇಳೆಗೆ ಈ ಜೋಡೋ-ಶಿನ್-ಶೂ ಪಂಥ ಜಪಾನಿನಲ್ಲೆಲ್ಲ ಹರಡಿತು.

	ಜೋಡೋ ಪಂಥಕ್ಕೆ ವಿರುದ್ಧವಾದ ನಿಲವನ್ನು ತಳೆದು ಹೆಸರು ಪಡೆದವರಲ್ಲಿ ನಿಖಿರೆನ್ (1222-1282) ಪ್ರಮುಖ. ಇವನ ಪ್ರಕಾರ ನಿಜವಾದ ಬೌದ್ಧಧರ್ಮ ಇರುವುದು ಸದ್ಧರ್ಮ ಪುಂಡರೀಕಸೂತ್ರದಲ್ಲಿ. ಈ ಸೂತ್ರದ ಹೆಸರನ್ನು ಪುರಶ್ಚರಣ ಮಾಡಿದರೆ ನಿರ್ವಾಣಕ್ಕೆ ನೆರವಾಗುವ ಶಕ್ತಿಬರುತ್ತದೆ (ನಮು-ವ್ಯೊಹೋ-ರೆಂಗೆ-ಕ್ಯೋ ಎನ್ನುವ ಮಂತ್ರ) ಈ ಕಲಿಕಾಲದಲ್ಲಿ ಹೆಸರನ್ನು ಸ್ಮರಿಸಿದರೇ ಸಂಬೋಧಿ ಒದಗುತ್ತದೆ ಎಂದು ನಿಖಿರೆನ್‍ವಾದ. ಪರಾತ್ಪರ ವಸ್ತುವಾದ ಬುದ್ಧನ ಮೂರ್ತ ಮತ್ತು ಸಾಂಕೇತಿಕ ಅಸ್ತಿತ್ವ ಪ್ರತಿಯೊಂದು ಪ್ರಾಣಿಯಲ್ಲಿಯೂ ಇರುತ್ತದೆ. ಬುದ್ಧನ ಸ್ವಭಾವ ಮತ್ತು ಅದರ ಅನೇಕಾನೇಕ ಅಭಿವ್ಯಕ್ತಿಗಳು ಮೂಲತಃ ಒಂದೇ ವಿಶ್ವದಲ್ಲೆಲ್ಲ ಇರುವ ಬೌದ್ಧಧರ್ಮಕ್ಕೆ ಒಂದೇ ಕೇಂದ್ರವೊಂದನ್ನು ಸ್ಥಾಪಿಸಬೇಕೆಂದು ನಿಖಿರೆನ್ ಪ್ರಯತ್ನಪಟ್ಟ. ಇವನ ನಿಲವನ್ನು ತಳೆದ ಶಾಖೆಗೆ ಇವನ ಹೆಸರೇ ಉಳಿದಿದೆ.

	ವಿಶ್ವದಲ್ಲೆಲ್ಲ ವಿಖ್ಯಾತವಾದ ಜಪಾನೀ ತತ್ತ್ವ ಪದ್ಧತಿಯೆಂದರೆ ಜೆóನ್ ಅಥವಾ ಧ್ಯಾನಪಂಥ. ಚೀನದಲ್ಲಿ ಜಾನ್ ಎಂದು ಬಳಕೆಗೆ ಬಂದ ಈ ಪಂಥದಲ್ಲಿ ತರ್ಕ, ಅನುಮಾನಗಳಿಗಿಂತ ಹೆಚ್ಚಾಗಿ ಧ್ಯಾನಕ್ಕೆ ಪ್ರಾಶಸ್ತ್ಯವಿದೆ. ಸಂಬೋಧಿಯ ಅನುಭವ ಹಠಾತ್ತಾಗಿ ಒಟ್ಟಾಗಿ ಆಗುವುದೇ ಇಲ್ಲಿಯ ಮುಖ್ಯ ವಿವರ. ಆರನೆಯ ಶತಮಾನದ ಆದಿಭಾಗದಲ್ಲಿ ಬೋಧಿಧರ್ಮನೆಂಬ ದಕ್ಷಿಣಭಾರತದ ಬೌದ್ಧಭಿಕ್ಷು ಚೀನಕ್ಕೆ ಬಂದು ಅಲ್ಲಿ ಈ ಪಂಥವನ್ನು ಪ್ರವರ್ತಿಸಿದನೆಂದು ಪ್ರತೀತಿ. 1180ರಲ್ಲಿ ಜಪಾನೀ ಭಿಕ್ಷುವಾದ ಐಸಾಯ್ (1141-1215) ಚೀನಕ್ಕೆ ಬಂದು ಈ ಧ್ಯಾನಮಾರ್ಗದಲ್ಲಿ ಕೌಶಲವನ್ನು ಪಡೆದು ಜಪಾನಿಗೆ ಹಿಂದಿರುಗಿ ಹಕಾಟಾ ಎಂಬಲ್ಲಿ ಶೋಜುಕುಜಿ ವಿಹಾರವನ್ನು ಸ್ಥಾಪಿಸಿ ಅಲ್ಲಿ ಜೆóನ್ ಉಪದೇಶಕ್ಕೆ ಆರಂಭಿಸಿದ. ಮೂವತ್ತು ವರ್ಷಗಳ ಅನಂತರ ದೋಗೆನ್ (1200-1253) ಎಂಬ ಭಿಕ್ಷು ಚೀನಕ್ಕೆ ಹೋಗಿ ಅಲ್ಲಿಂದ ಹಿಂದಕ್ಕೆ ಬಂದು ಪರಿಷ್ಕøತ ಜೆóನ್ ಪಂಥವನ್ನು ಸ್ಥಾಪಿಸಿದ. ಹೀಗೆ ಜೆóನ್ ಪಂಥದಲ್ಲಿ ಎರಡು ಶಾಖೆಗಳು: ಮೊದಲನೆಯದು ರಿನ್‍ಜಾಯ್ ಎನಿಸಿಕೊಳ್ಳುತ್ತದೆ. ಕಾಮಾಕುರಾ ಯುಗದಲ್ಲಿ (1185-1338) ಇದು ತುಂಬ ಪ್ರಚಾರದಲ್ಲಿತ್ತು. ಇದರ ಮಠಗಳು ಜಪಾನಿನ ಸಾಂಸ್ಕøತಿಕ ಕೇಂದ್ರಗಳಾದುವು. ಮುಂದೆ ಜೆóನ್ ತತ್ತ್ವಪದ್ಧತಿ ಬೆಳೆಯಲು ಕಾರಣನಾದ ಹಕುಯಿನ್ (1685-1768) ಈ ಶಾಖೆಗೆ ಸೇರಿದವ. ಎರಡನೆಯದು ಸೋಟೋ; ಇದನ್ನು ಸ್ಥಾಪಿಸಿದವ ದೋಗೆನ್.

	ದೋಗೆನ್ ಪರಿಷ್ಕರಿಸಿದ ಜೆóನ್ ಶಾಖೆ ಎಕಿಜೆನ್ ಪ್ರಾಂತ್ಯದ ಐಹೈಜಿ ದೇವಾಲಯದಲ್ಲಿ ಬೆಳೆಯಿತು. ದೋಗೆನ್ನನನ್ನು ಜಪಾನೀ ಜನರು ಬೋಧಿಸತ್ತ್ವನೆಂದೇ ಪರಿಗಣಿಸುತ್ತಾರೆ. 1223ರಲ್ಲಿ ಈತ ಚೀನಕ್ಕೆ ಹೋಗಿ ಅಲ್ಲಿ ಜಾನ್ ಆಚಾರ್ಯ ಜು-ಛಿಂಗ್ ಎಂಬುವನ ಬಳಿ ಶಿಷ್ಯವೃತ್ತಿಮಾಡಿ ಸಂಬೋಧಿಯನ್ನು ಪಡೆದು 1227ರಲ್ಲಿ ಜಪಾನಿಗೆ ಹಿಂದಿರುಗಿದ. 1236ರಲ್ಲಿ ಕೋಷೋಹೋರಿಂಗ್‍ಜಿ ಎಂಬ ಪ್ರಪ್ರಥಮ ಜೆóನ್ ವಿಹಾರವನ್ನು ಈತ ಸ್ಥಾಪಿಸಿದ. ಧ್ಯಾನಮಾರ್ಗದ ಅಂಗವಾಗಿ ಅಸನಜಯವನ್ನು (ಜಾಜೆನ್) ಇಲ್ಲಿ ನೂರಾರು ಗೃಹಸ್ಥರಿಗೂ ಭಿಕ್ಷುಗಳಿಗೂ ಕಲಿಸಿದ. ಬೌದ್ಧಧರ್ಮದ ತಿರುಳಿನಂತಿರುವ ಈ ಅಸನಜಯದಲ್ಲಿ ಸಿದ್ಧಾಂತ ಮತ್ತು ಆಚಾರಗಳ ಸಂಪೂರ್ಣ ಸಮನ್ವಯ ಇದೆ. ಇದೇ ಬುದ್ಧಸ್ವರೂಪ. ಮನುಷ್ಯನ ಸತ್ತ್ವ ಮತ್ತು ಎಲ್ಲ ಪ್ರಾಣಿಗಳ ಸತ್ತ್ವ ಇರುವುದು ಬುದ್ಧಸ್ವಭಾವದಲ್ಲಿಯೇ. ಇದನ್ನು ಸಾಕ್ಷಾತ್ಮಕರಿಸಿಕೊಳ್ಳಬೇಕಾದರೆ ಅಹಂಭಾವ ಆರಬೇಕು, ಸತ್ತ್ವಶುದ್ಧಿಯಾಗಬೇಕು; ಸ್ವಾರ್ಥಕಾಮನೆಯಿಂದ ಮಾಡುವ ಎಲ್ಲ ಕೆಲಸಗಳ, ಎಲ್ಲ ಚಿಂತನೆಗಳ ಕ್ಷಯವಾಗಬೇಕು; ತನ್ನನ್ನು ತಾನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳಬೇಕು, ಇದು ಶರಣಾಗತಿ ಅಥವಾ ಪ್ರಪತ್ತಿ. ಇದೇ ಜೆóನ್ ತಾತ್ತ್ವಿಕ ನೆಲೆ. ವ್ಯವಹಾರಿಕ ಪ್ರಪಂಚ ದಿಟವಾಗಿ ಪಾರಮಾರ್ಥಿಕ ಸತ್ಯವೇ; ಇದನ್ನು ಮೀರಿ ಅಥವಾ ಇದಕ್ಕೆ ಶೇಷವಾಗಿ ಇರುವುದು ಏನೂ ಇಲ್ಲ. ಇದೊಂದು ಬಗೆಯ ಅದ್ವೈತವೇ. ಆದರೆ ದೋಗೆನ್ ಸೂತ್ರಪಠಣ, ಪೂಜೆ, ಆರಾಧನೆ, ವ್ರತ ಇವುಗಳಿಗೆ ಪ್ರಾಶಸ್ತ್ಯವನ್ನು ಕೊಟ್ಟಿದ್ದ. ಮುಂದೆ ಜೆóನ್ ಪಂಥದಲ್ಲಿ ಇವುಗಳಿಗೆ ಪ್ರಾಶಸ್ತ್ಯ ತಪ್ಪಿತು. ಕೋಆನ್ ಎಂಬ ಸಂದಿಗ್ಧಸ್ಫೋಟನವಾಕ್ಯಗಳು ದೋಗೆನ್ ಕಾಲದಿಂದಲೂ ಜೆóನ್ ಸಂಪಾದದಲ್ಲಿ ಮುಖ್ಯ ಪರಿಕರವಾಗಿ ಉಳಿದಿವೆ. ಇವನ ಶೋಬೋಗೆನ್ ಜೋ ಎಂಬ ಸಿದ್ಧಾಂತಗ್ರಂಥ ಇಂದಿಗೂ ಪ್ರಸಿದ್ಧವಾಗಿದೆ.

	ಜಪಾನಿನ ಇತಿಹಾಸದಲ್ಲಿ ಮೇಜಿ ಪುನರುದ್ಧಾರವೆಂಬುದು ಮುಖ್ಯವಾದ ಘಟ್ಟ; ಇದು ನಡೆದುದು 1898ರಲ್ಲಿ, ಹದಿನೇಳನೆಯ ಶತಮಾನದಿಂದಲೂ ಅಲ್ಲಿಯವರೆಗೆ ಟೋಕೂಗಾವ ಎಂಬ ಶೊಗುನೇಟ್ ಅಧಿಕಾರಿಗಳು ಪರಂಪರಾಗತವಾಗಿ ಬಂದ ಚಕ್ರವರ್ತಿಗಳನ್ನು ಮೂಲೆಗೆ ತಳ್ಳಿ ತಾವು ರಾಜ್ಯವನ್ನಾಕ್ರಮಿಸಿಕೊಂಡಿದ್ದರು. ಆಗ ಜಪಾನ್ ಉಳಿದೆಲ್ಲ ರಾಷ್ಟ್ರಗಳಿಂದಲೂ ದೂರವಾಗಿ, ಕ್ರೈಸ್ತಧರ್ಮ ಬಹಿಷ್ಕøತವಾಗಿ, ಸ್ವತಂತ್ರ ಚಿಂತನೆ ಅಸಾಧ್ಯವಾಗಿದ್ದಿತು. ಮೇಜಿ ಪ್ರಕರಣದ ಅನಂತರ ಚಕ್ರವರ್ತಿ ಮತ್ತೆ ಅಧಿಕಾರಕ್ಕೆ ಬಂದ; ಟೋಕಿಯೋ ರಾಜಧಾನಿಯಾಯಿತು. ಇಲ್ಲಿಂದ ಮುಂದೆ ಹಲವಾರು ತಾತ್ತ್ವಿಕ ಪ್ರಣಾಳಿಕೆಗಳು ಮೈದಳೆದುವು. ಆದರೆ ಇವೆಲ್ಲ ಸಂಪ್ರದಾಯದ ಪಡಿಯಚ್ಚಿನಲ್ಲಿಯೇ ಬಂದುವು. ನಿದರ್ಶನಕ್ಕೆ ಯೋಷಿಮೂರ ಮಸಮೋಚಿ (ಜನ್ಮ 1839) ಸ್ಥಾಪಿಸಿದ ಶಿಂಶು-ಕ್ಯೋ ಧರ್ಮ. ಇದು ಷಿಂಟೋ ಧರ್ಮದ ಪರಿಷ್ಕøತರೂಪ. ಕೋಜಿಕಿ ಮತ್ತು ನಿಹೋಂಗಿ ಎಂಬ ಎರಡು ಗ್ರಂಥಗಳಿಗೆ ಈತ ವ್ಯಾಖ್ಯಾನ ಬರೆದು ವ್ರತಾಚರಣೆ ಮತ್ತು ಧ್ಯಾನದ ಸಮನ್ವಯ ಮಾಡಲೆತ್ನಿಸಿದ. ಪಾಪಗಳನ್ನು ತೊಡೆದುಹಾಕಲು ಬೆಂಕಿಯ ಮೇಲೆ ನಡೆಯುವುದು, ಕುದಿಯುವ ನೀರಿನಿಂದ ಶುದ್ಧೀಕರಣ ಮಾಡಿಕೊಳ್ಳುವುದು ಇವು ಈ ಧರ್ಮದಲ್ಲಿ ಮುಖ್ಯ. ಅಭ್ಯಂತರ ಪಾಪಗಳನ್ನು ನಿವಾರಿಸಿಕೊಂಡಲ್ಲದೆ ದೈವಿಕಸತ್ತ್ವ ದೇಹವನ್ನು ಆಕ್ರಮಿಸಿಕೊಳ್ಳಲಾರದೆಂದು ಇಲ್ಲಿನ ಕಲ್ಪನೆ.

	ಜಪಾನಿನ ತತ್ತ್ವಶಾಸ್ತ್ರದಲ್ಲಿ ಮೂಲಭೂತವಾದ ಕಲ್ಪನೆಯೆಂದರೆ ಕಾನ್ನಗರ ಎನ್ನುವುದು. ಈ ಮಾತಿಗೆ ದೇವತೆಗಳು ಇಷ್ಟಪಟ್ಟಂತೆ, ದೇವತೆಗಳನ್ನು ಅನುಸರಿಸಿ, ನಿಸರ್ಗಸಿದ್ಧವಾಗಿ ಎಂಬ ಅರ್ಥಗಳಿವೆ. ಜಪಾನಿನ ರಾಜವಂಶ ಆಮಾತಿರಾಸುವಿನಿಂದ ಬಂದುದು ಎಂದು ಕೋಟೋಕು ಚಕ್ರವರ್ತಿ (ಸು. 645) ಸ್ಪಷ್ಟಪಡಿಸಿದಾಗ ಈ ಮಾತನ್ನು ಬಳಸಿದ. ಹೀಗೆ ಆರಂಭವಾದ ಕಲ್ಪನೆ ಭಾರತದ ಋತ ಎನ್ನುವುದಕ್ಕೆ ಸಮಾನಾರ್ಥದ ಪದವಾಗಿಬಿಟ್ಟಿತು. ಪರಿಷ್ಕøತ ಷಿಂಟೋ ಧರ್ಮದ ನೆಲೆಯಲ್ಲಿ ಈ ಅರ್ಥ ಸ್ಫುರಿಸಿತು. ಮುಖ್ಯವಾಗಿ ಮೋಟೊ-ಬರಿ-ನೊರಿನಗ (1730-1801) ಮತ್ತು ಕಮೋ-ನೋ-ವಬುಂಚಿ ಇವರ ವಿಚಾರಧಾರೆಯಲ್ಲಿ ಈ ವಿಶೇಷಾರ್ಥ ಸ್ಪಷ್ಟವಾಯಿತು. ಜಪಾನೀ ವಿದ್ವಾಂಸರು ಕಾನ್ನಗರ ಕಲ್ಪನೆಯಲ್ಲಿ ಸಮಾಜವಾದ, ಮಾನವವಾದಗಳನ್ನು ನಿಲ್ಲಿಸಲು ಪ್ರಯತ್ನಪಟ್ಟಿದ್ದಾರೆ. ಇದು ಕಾನ್‍ಫ್ಯೂಷನ್ ಸಿದ್ಧಾಂತಕ್ಕೆ ಮೇಲೆ ಮೇಲೆ ಸರಿಹೋಗುವಂತೆ ತೋರಿದರೂ ಮೂಲದಲ್ಲಿ ಲಾವೋಟ್ಸುವಿನ ತಾಓ ಸಿದ್ಧಾಂತಕ್ಕೆ ಹೊಂದಿಕೊಳ್ಳುತ್ತದೆ ಎಂದು ವಿದ್ವಾಂಸರ ಅಭಿಪ್ರಾಯ. ಚೀನದಿಂದಲೇ ಜಪಾನಿಗೆ ಬಂದ ಯಿನ್-ಯಂಗ್ (ಪುಂಸ್ತ್ರೀ) ಕಲ್ಪನೆಯೂ ಕಾನ್ನಗರದ ನೆಲೆಯಲ್ಲಿಯೇ ವಿವೇಚಿಸಲ್ಪಟ್ಟಿತು.

	ಇದು ಜಪಾನೀ ದರ್ಶನಗಳಲ್ಲಿ ಹಾಸುಹೊಕ್ಕಾಗಿ ಸೇರಿಬಂದಿರುವ ವಿಚಾರಧಾರೆ. ಜಪಾನೀ ತತ್ತ್ವಜ್ಞಾನಕ್ಕೆ ಯಾವುದಾದರೂ ಮೂಲಭೂತವಾದ ಕಲ್ಪನೆಯಿದ್ದರೆ ಅದು ಕಾನ್ನಗರ. ಷಿಂಟೋಪಂಥದ ಗ್ರಂಥಗಳಲ್ಲಿ ಇದು ಮುಖ್ಯವಾಗಿಯೇ ಬರುವ ವಿಚಾರ. ಬೌದ್ಧಧರ್ಮ ಜಪಾನಿನ ಹೃದಯವನ್ನು ಹಿಡಿದಾಗಲೂ ಇದು ಅಮಿತಾಭ (ಅಮಿದ) ಬುದ್ಧನ ಆದಿಸಂಕಲ್ಪವೆಂದು ಪರಿಗಣಿತವಾಯಿತು. ಕಾನ್ನಗರ ನಮ್ಮ ಒಡಲಲ್ಲಿ ಇರುವ ಮಾನ ರಾಗ-ದ್ವೇಷಗಳು ಇದನ್ನು ಮರೆಮಾಚಿಬಿಡುತ್ತವೆ. ಕಾನ್ನಗರ ಮತ್ತು ಬೆಳಕಿಗೆ ಬರಬೇಕಾದರೆ ಮನುಷ್ಯ ಯಥಾರ್ಥವಾದ ಭಾವಗಳನ್ನು ತಳೆಯಬೇಕು. ಇದನ್ನು ಜಪಾನೀ ಭಾಷೆಯಲ್ಲಿ ಮೊನೊ-ನೋ-ಅವಾರೆ ಎಂದು ಕರೆಯುತ್ತಾರೆ. ಕಾನ್ನಗರ ಜ್ಞಾನಾತ್ಮಕವಾದರೆ ಮೊನೊ-ನೋ-ಅವಾರೆ ಕ್ರಿಯಾತ್ಮಕ. ಎರಡೂ ಜಪಾನೀತತ್ತ್ವಶಾಸ್ತ್ರದಲ್ಲಿ ಪ್ರಮುಖವಾದ, ಪರಸ್ಪರ ಸಂಬಂಧ ಕಲ್ಪನೆಗಳು.

	ಜಪಾನೀತತ್ತ್ವ ಚಿಂತನೆಯಲ್ಲಿ ವ್ಯಕ್ತಿ ತನ್ನ ಮೂಲ, ನಿಸರ್ಗಸಿದ್ಧ ಸ್ವಭಾವದೊಳಗೆ ನಿಲ್ಲುವುದು ಸಬಿ ಎನಿಸಿಕೊಳ್ಳುತ್ತದೆ. ಇದನ್ನು ಕೈವಲ್ಯವೆಂದು ಅನುವಾದ ಮಾಡಬಹುದು. ತಾನು ತನ್ನೊಳಗೆ ದಿಟವಾಗಿ ಮುಳುಗುವುದು ಎಂದಿದರರ್ಥ. ಇಲ್ಲಿ ಮನುಷ್ಯ ತನ್ನ ಪ್ರವೃತ್ತಿಗಳನ್ನು ಅರಿತು ಅದಕ್ಕೆ ತನ್ನ ಕಾಮನೆಗಳನ್ನೂ ಕ್ರಿಯೆಗಳನ್ನೂ ಅಳವಡಿಸಿಕೊಳ್ಳಬೇಕು. ಇದು ನೆರವು ಅಥವಾ ಉಪಾಸನೆ (ಸಮನ್ವಯ). ಅಂತೂ ಜಪಾನೀಯರ ಮನೋವೃತ್ತಿಯಲ್ಲಿ ವ್ಯಕ್ತಿ ಮುಖ್ಯ. ವಿಶ್ವವೆಲ್ಲವನ್ನೂ ವ್ಯಕ್ತಿಯಲ್ಲೇ ಅವರು ಕಾಣುತ್ತಾರೆ.									(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ